NationalBusinessSchemes

ದೇಶದ ರೈತರಿಗೆ ಗುಡ್ ನ್ಯೂಸ್ ; ಪಿಎಂ ಕಿಸಾನ್ ಮೊತ್ತ ಹೆಚ್ಚಳ, ಇನ್ಮುಂದೆ ₹6,000 ಬದಲು ₹10,000 ಸಿಗುತ್ತಾ?

Spread the love

ಕ್ರಿಯೇಟರ್ ಕನ್ನಡ ಡಿಜಿಟಲ್ ಡೆಸ್ಕ್ : ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM Kisan Samman Nidhi Yojana)ಯಿಂದ ಪ್ರಯೋಜನ ಪಡೆಯುತ್ತಿರುವ ಲಕ್ಷಾಂತರ ರೈತರಿಗೆ ಮಹತ್ವದ ಸುದ್ದಿಯೊಂದು ಇಲ್ಲಿದೆ. ಈ ಯೋಜನೆಯಡಿಯಲ್ಲಿ ನೀಡಲಾಗುವ ವಾರ್ಷಿಕ ಆರ್ಥಿಕ ಸಹಾಯವನ್ನ ಹೆಚ್ಚಿಸಲು ಕೇಂದ್ರ ಸರ್ಕಾರ ಪರಿಗಣಿಸುತ್ತಿದೆ ಎಂದು ವರದಿಯಾಗಿದೆ. ಪ್ರಸ್ತುತ, ರೈತರು ವಾರ್ಷಿಕವಾಗಿ ₹6,000 ಪಡೆಯುತ್ತಿದ್ದಾರೆ, ಆದ್ರೆ, ಈ ಮೊತ್ತವನ್ನ ₹10,000ಕ್ಕೆ ಹೆಚ್ಚಿಸುವ ಸಾಧ್ಯತೆಯಿದೆ. ಅಂದ್ಹಾಗೆ, ಈ ಯೋಜನೆಯ ನಿಧಿಯನ್ನ ಹೆಚ್ಚಿಸಬೇಕೆಂದು ರೈತರು ಬಹಳ ಹಿಂದಿನಿಂದಲೂ ಒತ್ತಾಯಿಸುತ್ತಿದ್ದಾರೆ.

ಸರ್ಕಾರದ ಹೈ ಪವರ್ ಪರ್ಚೇಸ್ ಸಮಿತಿಯ ಸದಸ್ಯ ಮತ್ತು ಭಾರತೀಯ ಕೃಷಕ್ ಸಮಾಜದ ರಾಷ್ಟ್ರೀಯ ಅಧ್ಯಕ್ಷರಾದ ಡಾ. ಕೃಷ್ಣವೀರ್ ಚೌಧರಿ ಕೂಡ ಈ ಯೋಜನೆಯ ನಿಧಿಯಲ್ಲಿ ಹೆಚ್ಚಳದ ಬಗ್ಗೆ ಸುಳಿವು ನೀಡಿದ್ದಾರೆ. ಡಾ. ಕೃಷ್ಣವೀರ್ ಚೌಧರಿ ಅವರ ಪ್ರಕಾರ, ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ ಮೊತ್ತವನ್ನ ಹೆಚ್ಚಿಸುವ ಪ್ರಸ್ತಾಪವನ್ನ ಪರಿಗಣಿಸುತ್ತಿದೆ. ರೈತರಿಗೆ ವಾರ್ಷಿಕ ಸಹಾಯವನ್ನು ₹6,000 ರಿಂದ ₹10,000 ಕ್ಕೆ ಹೆಚ್ಚಿಸುವ ಸಾಧ್ಯತೆಯಿದೆ ಎಂದವರು ಹೇಳಿದ್ದಾರೆ ಎಂದು ವರದಿಯಾಗಿದೆ. ನುಹ್ ಪಂಚಾಯತ್ ಭವನದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ ಅವರು ಈ ಹೇಳಿಕೆ ನೀಡಿದ್ದಾರೆ.

ಆದಾಗ್ಯೂ, ಪಿಎಂ ಕಿಸಾನ್ ನಿಧಿಯ ಮೊತ್ತವನ್ನ ಹೆಚ್ಚಿಸುವ ಬಗ್ಗೆ ಕೇಂದ್ರ ಸರ್ಕಾರವು ಯಾವುದೇ ಅಧಿಕೃತ ಘೋಷಣೆಯನ್ನ ಮಾಡಿಲ್ಲ. ಆದ್ದರಿಂದ, ಇದೀಗ, ₹10,000 ಮೊತ್ತವನ್ನ ಸಂಭಾವ್ಯ ಬದಲಾವಣೆಯಾಗಿ ಮಾತ್ರ ನೋಡಬೇಕು. ಸರ್ಕಾರ ಈ ಪ್ರಸ್ತಾವನೆಯನ್ನ ಅನುಮೋದಿಸಿದರೆ, ರೈತರು ಪ್ರಸ್ತುತ ಮೊತ್ತಕ್ಕಿಂತ ವಾರ್ಷಿಕವಾಗಿ ₹4,000 ಹೆಚ್ಚು ಪಡೆಯುತ್ತಾರೆ. ಇದು ಸಣ್ಣ ಕೃಷಿ ವೆಚ್ಚಗಳನ್ನ ಪೂರೈಸುವಲ್ಲಿ ರೈತರಿಗೆ ಹೆಚ್ಚುವರಿ ಆರ್ಥಿಕ ಸಹಾಯವಾಗಲಿದೆ.

ಪಿಎಂ ಕಿಸಾನ್ ಯೋಜನೆಯ ಪ್ರಮುಖ ವಿವರಗಳು!

ಪ್ರಸ್ತುತ ಸಿಗುವ ಮೊತ್ತ: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಅರ್ಹ ರೈತರಿಗೆ ವಾರ್ಷಿಕ ₹6,000 ಆರ್ಥಿಕ ನೆರವನ್ನು ತಲಾ ₹2,000 ರಂತೆ ಮೂರು ಸಮಾನ ಕಂತುಗಳಲ್ಲಿ ನೇರವಾಗಿ ಬ್ಯಾಂಕ್ ಖಾತೆಗೆ (DBT) ಜಮೆ ಮಾಡಲಾಗುತ್ತದೆ.

ಯಾರು ಅರ್ಹರು : ತಮ್ಮ ಹೆಸರಿನಲ್ಲಿ ಕೃಷಿ ಯೋಗ್ಯ ಭೂಮಿಯನ್ನು ಹೊಂದಿರುವ ಸಣ್ಣ ಮತ್ತು ಅತಿ ಸಣ್ಣ ರೈತ ಕುಟುಂಬಗಳು ಈ ಪಿಎಂ ಕಿಸಾನ್ ಯೋಜನೆಯ ಲಾಭ ಪಡೆಯಲು ಅರ್ಹರಾಗಿರುತ್ತಾರೆ.

ಕಂತಿನ ಹಣ ಪಡೆಯಲು ಕಡ್ಡಾಯ ನಿಯಮಗಳು!

ಇ-ಕೆವೈಸಿ (e-KYC) ಕಡ್ಡಾಯ: ಪಿಎಂ ಕಿಸಾನ್ ಯೋಜನೆಯ ಮುಂದಿನ ಕಂತುಗಳು ಯಾವುದೇ ಅಡೆತಡೆಯಿಲ್ಲದೆ ಖಾತೆಗೆ ಜಮೆಯಾಗಲು ರೈತರು ಕಡ್ಡಾಯವಾಗಿ e-KYC ಪ್ರಕ್ರಿಯೆಯನ್ನು ಪೂರ್ಣಗೊಳಿಸಿರಬೇಕು.

ಭೂ ದಾಖಲೆಗಳ ಪರಿಶೀಲನೆ: ರೈತರ ಜಮೀನಿನ ಪಹಣಿ (RTC) ಆಧಾರ್ ಸಂಖ್ಯೆಯೊಂದಿಗೆ ಲಿಂಕ್ ಆಗಿರಬೇಕು ಮತ್ತು ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ (NPCI Link) ಆಗಿರುವುದು ಅತ್ಯಗತ್ಯವಾಗಿದೆ.

ಅಧಿಕೃತ ವೆಬ್‌ಸೈಟ್ : ಹೆಚ್ಚಿನ ಮಾಹಿತಿ ಮತ್ತು ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೋ ಅಥವಾ ಇಲ್ಲವೋ ಎಂದು ಪರಿಶೀಲಿಸಲು ರೈತರು pmkisan.gov.in ಪೋರ್ಟಲ್‌ಗೆ ಭೇಟಿ ನೀಡಬಹುದು.

ಪಿಎಂ ಕಿಸಾನ್ ಸಹಾಯವಾಣಿ ಸಂಖ್ಯೆ : ಪಿಎಂ ಕಿಸಾನ್ ಕಂತಿನ ಹಣ ನಿಮ್ಮ ಬ್ಯಾಂಕ್ ಖಾತೆಗೆ ಜಮೆಯಾಗದಿದ್ದರೆ ಅಥವಾ ಅರ್ಜಿಯ ಸ್ಥಿತಿಗತಿಯ ಬಗ್ಗೆ ಯಾವುದೇ ಗೊಂದಲವಿದ್ದರೆ, ರೈತರು ಪಿಎಂ ಕಿಸಾನ್ ಉಚಿತ ಸಹಾಯವಾಣಿ ಸಂಖ್ಯೆ 155261ಅಥವಾ 011-24300606ಗೆ ಕರೆ ಮಾಡಿ ಪರಿಹಾರ ಪಡೆಯಬಹುದು.

Leave a Reply

Your email address will not be published. Required fields are marked *