ಕಟ್ಟಾ ಬ್ರಹ್ಮಚಾರಿ ಆಂಜನೇಯನ ಮಗ ಯಾರು ಗೊತ್ತಾ.?
ಕ್ರಿಯೇಟರ್ ಕನ್ನಡ ಡಿಜಿಟಲ್ ಡೆಸ್ಕ್ : ಅಂಜನೇಯ ಸ್ವಾಮಿ ಸಾಮಾನ್ಯವಾಗಿ ಕಟ್ಟಾ ಬ್ರಹ್ಮಚಾರಿ. ಅದ್ರೆ ಕೆಲ ಪುರಾಣಗಳ ಪ್ರಕಾರ, ಹನುಮಂತನಿಗೆ ಒಬ್ಬ ಮಗನಿದ್ದಾನೆ. ಹಾಗಿದ್ರೆ, ಅದೇನು ಕಥೆ ತಿಳಿಯೋಣ ಬನ್ನಿ.
ರಾವಣ ಸೀತಾ ಮಾತೆಯನ್ನ ಅಪಹರಿಸಿದಾಗ ಆಂಜನೇಯ ಸ್ವಾಮಿ ಲಂಕೆಗೆ ತೆರಳಿ ಸೀತಾ ಮಾತೆಯ ಜಾಡು ಹಿಡಿದು ವಾಪಸ್ ಬರುವಾಗ ಆತನ ಮಯ್ಯಿಂದ ಬೆವರಿನ ಹನಿಯೊಂದು ಜಾರಿ ಸಮುದ್ರಕ್ಕೆ ಬೀಳುತ್ತೆ. ಆಗ ಆ ಬೆವರಿನ ಹನಿಯನ್ನ ಮೀನೊಂದು ನುಂಗಿ ಗರ್ಭಿಣಿಯಾಗಿ ಮಕರದ್ವಜ ಅನ್ನೋ ಬಲಶಾಲಿಗೆ ಜನ್ಮ ನೀಡುತ್ತದೆ.
ವಿಶೇಷವೆಂದರೆ, ಮಕರದ್ವಜ ಕೂಡ ಹನುಮಂತನಂತೆ ಧೈರ್ಯವಂತ. ಪಾತಾಳ ಲೋಕದ ರಾಜ ಮತ್ತು ರಾವಣನ ಸಹೋದರ ಅಹಿರಾವಣನಿಗೆ ನಿಷ್ಠಾವಂತನಾಗಿದ್ದ. ಒಮ್ಮೆ ಅಹಿರಾವಣನು ರಾಮ ಮತ್ತು ಲಕ್ಷ್ಮಣರನ್ನ ಪಾತಾಳಕ್ಕೆ ಕರೆದೊಯ್ದಾಗ, ಹನುಮಂತನು ಅವರನ್ನ ರಕ್ಷಿಸಲು ಹಿಂಬಾಲಿಸಿದ. ಆದ್ರೆ, ಪಾತಾಳ ದ್ವಾರದಲ್ಲಿ ಮಕರಧ್ವಜ ಹನುಮಂತನಿಗೆ ಅಡ್ಡಿಯಾಗಿ ಸವಾಲು ಹಾಕಿದ ಮತ್ತು ತನ್ನನ್ನು ತಾನು ಮಕರಧ್ವಜ, ಬಲಿಷ್ಠ ಯೋಧ ಹನುಮನ ಮಗ ಎಂದು ಪರಿಚಯಿಸಿಕೊಂಡ.
ಆಗ ಅಚ್ಚರಿಗೊಂಡ ಹನುಮಂತ, “ನಾನೇ ಹನುಮ, ಆದರೆ ನಾನು ಹುಟ್ಟಿನಿಂದಲೇ ಬ್ರಹ್ಮಚಾರಿ. ಹಾಗಾಗಿ ನನಗೆ ಮಗನಿರಲು ಸಾಧ್ಯವೇ ಇಲ್ಲ” ಎಂದು ಹೇಳಿದ. ಬಳಿಕ ಹನುಮಂತನು ಧ್ಯಾನದಲ್ಲಿ ಕಣ್ಣು ಮುಚ್ಚಿ ಮಕರಧ್ವಜನ ಜನನಕ್ಕೆ ತನ್ನ ಬೆವರಿನ ಹನಿಯೇ ಕಾರಣ ಅನ್ನೋ ಅಂಶವನ್ನ ತಿಳಿದುಕೊಂಡ.
ಆದಾಗ್ಯೂ ಮಕರಧ್ವಜ ಅಪಾರ ನಿಷ್ಠಾವಂತನಾಗಿದ್ದು, ತನ್ನ ತಂದೆ ಹನುಮನಿಗೆ, “ತನ್ನ ಗುರು ಅಹಿರಾವಣನಿಗೆ ದ್ರೋಹ ಮಾಡಲು ಸಾಧ್ಯವಿಲ್ಲ. ಪಾತಾಳವನ್ನು ಪ್ರವೇಶಿಸಬೇಕಾದ್ರೆ, ತನ್ನೊಂದಿಗೆ ಹೋರಾಡಬೇಕಾಗುತ್ತೆ ಎಂದು ಹೇಳ್ತಾನೆ. ಆಗ ಹನುಮಂತನು ಮಕರಧ್ವಜನನ್ನ ದ್ವಂದ್ವಯುದ್ಧದಲ್ಲಿ ಸೋಲಿಸಿ, ನಂತ್ರ ಅಹಿರಾವಣನನ್ನು ಕೊಂದು ರಾಮ- ಲಕ್ಷ್ಮಣರನ್ನ ರಕ್ಷಿಸುತ್ತಾನೆ. ಹಿಂದಿರುಗುವಾಗ ಮಕರಧ್ವಜನನ್ನ ಆಶೀರ್ವದಿಸಿ, ಸದಾ ಪಾತಳಲೋಕವನ್ನ ರಕ್ಷಿಸುವಂತೆ ಹೇಳಿ ಬರುತ್ತಾನೆ. ಬಳಿಕ ಪಾತಾಳ ಲೋಕಕ್ಕೆ ಮಕರದ್ವಜನೇ ಮಹಾರಾಜನಾಗಿ ನ್ಯಾಯಯುತ ಆಳ್ವಿಕೆ ನಡೆಸುತ್ತಾನೆ ಅನ್ನೋದು ವಿಶೇಷ.
ಈ ಘಟನೆ ಹನುಮಂತನ ಜೀವನದಲ್ಲಿ ಅಸಾಧಾರಣ ಘಟ್ಟವಾಗಿದ್ದು, ರಾಮನಿಗೆ ಹನುಮ ಹೇಗೋ ಅಹಿರಾವಣನಿಗೆ ಮಕರಧ್ವಜನೂ ನಿಷ್ಠಾವಂತನಾಗಿದ್ದ ಅನ್ನೋದೇ ವಿಶೇಷ.
ಮಕರಧ್ವಜನಿಗೆ ಪಾತಾಳ ಲೋಕದ ರಾಜ ಪಟ್ಟ ಸಿಕ್ಕಿದ್ದು ಹೇಗೆ?
ಯುದ್ಧದಲ್ಲಿ ಹನುಮಂತನು ಅಹಿರಾವಣನನ್ನು ಸಂಹರಿಸಿದ ನಂತರ, ಪಾತಾಳ ಲೋಕಕ್ಕೆ ಹೊಸ ರಾಜನ ಅಗತ್ಯವಿತ್ತು. ಮಕರಧ್ವಜನು ತನ್ನ ಸ್ವಾಮಿ ಮತ್ತು ಗುರುವಾದ ಅಹಿರಾವಣನಿಗೆ ತೋರಿದ ನಿಷ್ಠೆ ಹಾಗೂ ತನ್ನ ತಂದೆಯಾದ ಹನುಮಂತನ ವಿರುದ್ಧವೇ ಧರ್ಮಕ್ಕಾಗಿ ಹೋರಾಡಿದ ಸಾಹಸವನ್ನು ಕಂಡು ಶ್ರೀರಾಮನು ಅತ್ಯಂತ ಪ್ರಸನ್ನನಾಗುತ್ತಾನೆ. ಶ್ರೀರಾಮನ ಸೂಚನೆಯ ಮೇರೆಗೆ ಹನುಮಂತನು ಮಕರಧ್ವಜನನ್ನು ಪಾತಾಳ ಲೋಕದ ಸಿಂಹಾಸನದ ಮೇಲೆ ಕೂರಿಸಿ, ಆತನಿಗೆ ರಾಜನಾಗಿ ಪಟ್ಟಾಭಿಷೇಕ ಮಾಡುತ್ತಾನೆ. ಅಲ್ಲದೆ, ಸದಾ ಧರ್ಮದ ಹಾದಿಯಲ್ಲಿ ನಡೆದು ಪಾತಾಳ ಲೋಕವನ್ನು ರಕ್ಷಿಸುವಂತೆ ಆಶೀರ್ವದಿಸುತ್ತಾನೆ.
ಮಕರಧ್ವಜ ಮತ್ತು ಹನುಮಂತನ ಅಪರೂಪದ ದೇವಸ್ಥಾನ:
ಭಾರತದಲ್ಲಿ ತಂದೆ ಮತ್ತು ಮಗ ಇಬ್ಬರನ್ನೂ ಒಟ್ಟಿಗೆ ಪೂಜಿಸುವ ಅಪರೂಪದ ದೇವಸ್ಥಾನವು ಗುಜರಾತ್ನ ದ್ವಾರಕಾ ಬಳಿಯ ‘ಭೇಟ್ ದ್ವಾರಕಾ’ (Bet Dwarka) ಎಂಬ ದ್ವೀಪದಲ್ಲಿದೆ. ಇದನ್ನು ‘ಹನುಮಾನ್ ದಂಡಿ ದೇವಸ್ಥಾನ’ ಎಂದು ಕರೆಯಲಾಗುತ್ತದೆ. ಈ ದೇವಸ್ಥಾನದಲ್ಲಿ ಹನುಮಂತ ಮತ್ತು ಮಕರಧ್ವಜ ಇಬ್ಬರ ಮೂರ್ತಿಗಳೂ ಯಾವುದೇ ಆಯುಧವಿಲ್ಲದೆ, ಶಾಂತ ಮುದ್ರೆಯಲ್ಲಿ ಪ್ರತಿಷ್ಠಾಪನೆಗೊಂಡಿರುವುದು ವಿಶೇಷವಾಗಿದೆ. ಈ ಪೌರಾಣಿಕ ಹಿನ್ನೆಲೆಯುಳ್ಳ ಜಾಗಕ್ಕೆ ಪ್ರತಿ ವರ್ಷ ಸಾವಿರಾರು ಭಕ್ತರು ಭೇಟಿ ನೀಡಿ ಆಶೀರ್ವಾದ ಪಡೆಯುತ್ತಾರೆ.
