ವಾಟ್ಸಾಪ್’ನಲ್ಲಿ “No” ಎಂದು ಉತ್ತರಿಸೋ ಮುನ್ನ ಹುಷಾರ್, ನಿಮ್ಮ ಬ್ಯಾಂಕ್ ಖಾತೆ ಖಾಲಿಯಾಗ್ಬೋದು!
ಕ್ರಿಯೇಟರ್ ಕನ್ನಡ ಡಿಜಿಟಲ್ ಡೆಸ್ಕ್ : ವಾಟ್ಸಾಪ್’ನಲ್ಲಿ ಹೊಸ ಸೈಬರ್ ವಂಚನೆ ಬೆಳಕಿಗೆ ಬಂದಿದ್ದು, ನೀವು ನೋ ಎಂದು ಉತ್ತರಿಸಿದ್ರೂ, ನಿಮ್ಮ ಬ್ಯಾಂಕ್ ಖಾತೆ ಖಾಲಿಯಾಗಬಹುದು. ಹೌದು, ವಾಟ್ಸಾಪ್ ಬಳಸುವ ಜನರು ಹೊಸ ರೀತಿಯ ಸೈಬರ್ ವಂಚನೆಯ ಬಗ್ಗೆ ಎಚ್ಚರದಿಂದಿರಬೇಕು. “ನೋ” ಎಂಬ ಒಂದೇ ಉತ್ತರ ನಿಮ್ಮ ಬ್ಯಾಂಕ್ ಖಾತೆಗಳನ್ನ ಖಾಲಿ ಮಾಡಬಹುದು ಎಂದು ಪೊಲೀಸರು ಎಚ್ಚಸಿದ್ದಾರೆ.
ವಂಚಕರು ಬ್ಯಾಂಕ್ ಖಾತೆಯಿಂದ ಹಣ ಡೆಬಿಟ್ ಆಗಿದೆ ಎಂದು ಹೇಳಿಕೊಂಡು ಅಪರಿಚಿತ ಅಂತರರಾಷ್ಟ್ರೀಯ ಸಂಖ್ಯೆಗಳಿಂದ ನಕಲಿ ಸಂದೇಶಗಳನ್ನ ಕಳುಹಿಸುತ್ತಾರೆ. ಈ ರೀತಿಯಾಗಿ, ಜನರನ್ನು ಮೋಸಗೊಳಿಸಲು ಹೊಸ ವಿಧಾನಗಳನ್ನ ಕಂಡುಕೊಂಡಿದ್ದಾರೆ. ವಾಟ್ಸಾಪ್ ಮೂಲಕ ನಕಲಿ ಲಿಂಕ್’ಗಳನ್ನ ಕಳುಹಿಸುವುದನ್ನ ಮತ್ತು ಸ್ಪ್ಯಾಮ್ ಲಿಂಕ್’ಗಳ ಮೂಲಕ ವೈಯಕ್ತಿಕ ವಿವರಗಳನ್ನ ಸಂಗ್ರಹಿಸುವುದನ್ನ ಮತ್ತು ಬ್ಯಾಂಕ್ ಖಾತೆಗಳಿಂದ ಹಣವನ್ನ ಕದಿಯುವುದನ್ನ ನಾವು ಈಗಾಗಲೇ ನೋಡಿದ್ದೇವೆ. ಆದ್ರೆ, ಈಗ ವಂಚಕರು ಹೊಸ ತಂತ್ರವನ್ನ ಬಳಸುತ್ತಿದ್ದಾರೆ. ಈ ತಂತ್ರ ಹೇಗೆ ಕೆಲಸ ಮಾಡುತ್ತದೆ.? ಹೇಗೆ ಪಾರಾಗಬೇಕು ಎಂಬುದನ್ನು ತಿಳಿಯಲು ಮುಂದೆ ಓದಿ.
ನಿಮ್ಮ ಬ್ಯಾಂಕ್ ಖಾತೆಯಿಂದ ನಿರ್ದಿಷ್ಟ ಮೊತ್ತವನ್ನ ಡೆಬಿಟ್ ಮಾಡಲಾಗಿದೆ ಎಂದು ಸೈಬರ್ ಅಪರಾಧಿಗಳು ವಾಟ್ಸಾಪ್’ನಲ್ಲಿ ಹೇಳಿಕೊಳ್ಳುತ್ತಾರೆ. ಒಂದ್ವೇಳೆ ನೀವು ಆ ವಹಿವಾಟು ನಡೆಸದಿದ್ದರೆ, ತಕ್ಷಣ “ನೋ” ಎಂದು ಉತ್ತರಿಸಲು ನಿಮ್ಮನ್ನು ಕೇಳುತ್ತಾರೆ. ಬಲಿಪಶುಗಳು ಈ ಸಂದೇಶ ನೋಡಿದ ತಕ್ಷಣ, ಚಿಂತಿತಗೊಂಡು ವಹಿವಾಟು ನಡೆಸಿಲ್ಲ ಎಂದು ಹೇಳಲು “ನೋ” ಎಂದು ಉತ್ತರಿಸುತ್ತಾರೆ. ಆದ್ರೆ, ನಿಜವಾದ ಅಪಾಯ ಇರುವುದು ಇಲ್ಲಿಯೇ. “ನೋ” ಎಂದು ಉತ್ತರಿಸಿದ ನಂತ್ರ ಬ್ಯಾಂಕ್ ಖಾತೆಯಿಂದ ಹಣವನ್ನ ಡೆಬಿಟ್ ಮಾಡಲಾಗುತ್ತದೆ. ಅದರ ನಂತರ, ಸಂಪೂರ್ಣ ಬ್ಯಾಂಕ್ ಖಾತೆಯನ್ನ ಬಹು ವಹಿವಾಟುಗಳ ಮೂಲಕ ಖಾಲಿ ಮಾಡಲಾಗುತ್ತದೆ.
ನೀವು “ನೋ” ಎಂದು ಉತ್ತರಿಸಿದಾಗ ಅದು ಮಾಲ್ವೇರ್ ಫೈಲ್ ಅಥವಾ ಸ್ಪೈವೇರ್ ಸಕ್ರಿಯಗೊಳಿಸುತ್ತದೆ. ಈ ಮಾಲ್ವೇರ್ ನಿಮ್ಮ ಫೋನ್’ಗೆ ಪ್ರವೇಶಿಸುತ್ತದೆ ಮತ್ತು ಹ್ಯಾಕರ್’ಗಳಿಗೆ ನಿಮ್ಮ ಫೋನ್’ನ ಮೇಲೆ ನಿಯಂತ್ರಣವನ್ನ ನೀಡುತ್ತದೆ. ನಂತ್ರ ಹ್ಯಾಕರ್’ಗಳು ನಿಮ್ಮ ಫೋನ್’ನಲ್ಲಿರುವ ವೈಯಕ್ತಿಕ ಮಾಹಿತಿ, ಬ್ಯಾಂಕಿಂಗ್ ವಿವರಗಳು ಮತ್ತು ನೀವು ಮಾಡುವ ಪ್ರತಿಯೊಂದು ಚಾಟ್ ಮೇಲ್ವಿಚಾರಣೆ ಮಾಡಬಹುದು. ಇದರಿಂದಾಗಿ, ನಿಮ್ಮ ಬ್ಯಾಂಕ್ ಖಾತೆಯ ವಿವರಗಳನ್ನ ಸುಲಭವಾಗಿ ಕದಿಯಬಹುದು ಎಂದು ಪೊಲೀಸರು ಹೇಳುತ್ತಾರೆ. ಈ ಹೊಸ ವಂಚನೆಗೆ ಬಲಿಯಾಗುವುದನ್ನ ತಪ್ಪಿಸಲು ವಾಟ್ಸಾಪ್ ಬಳಕೆದಾರರು ಕೆಲವು ಪ್ರಮುಖ ಮುನ್ನೆಚ್ಚರಿಕೆಗಳನ್ನ ತೆಗೆದುಕೊಳ್ಳಬೇಕಾಗುತ್ತದೆ.
ನೀವು ವಾಟ್ಸಾಪ್’ನಲ್ಲಿ ಅಂತಹ ಯೆಸ್, ನೋ ಸಂದೇಶಗಳನ್ನು ಸ್ವೀಕರಿಸಿದರೆ, ಪ್ರತಿಕ್ರಿಯಿಸಬೇಡಿ. ತಕ್ಷಣವೇ ಆ ಸಂಖ್ಯೆಯನ್ನ ನಿರ್ಬಂಧಿಸಿ. ಯಾವುದೇ ಸಂದರ್ಭದಲ್ಲೂ ಅಪರಿಚಿತ ಸಂಖ್ಯೆಗಳಿಂದ, ವಿಶೇಷವಾಗಿ ಅಂತರರಾಷ್ಟ್ರೀಯ ಸಂಖ್ಯೆಗಳಿಂದ ಬರುವ ಬ್ಯಾಂಕ್ ವಹಿವಾಟು ಸಂದೇಶಗಳಿಗೆ ಪ್ರತಿಕ್ರಿಯಿಸಬೇಡಿ. ತಕ್ಷಣ ಅವುಗಳನ್ನ ನಿರ್ಬಂಧಿಸಿ. ನಿಮ್ಮ ಬ್ಯಾಂಕ್ ಖಾತೆಯಿಂದ ಹಣವನ್ನ ಡೆಬಿಟ್ ಮಾಡಲಾಗಿದೆ ಎಂಬ ಸಂದೇಶ ನೀವು ಸ್ವೀಕರಿಸಿದರೆ, ಮೊದಲು ಅಧಿಕೃತ ಬ್ಯಾಂಕ್ ಅಪ್ಲಿಕೇಶನ್’ನಲ್ಲಿ ನಿಮ್ಮ ಖಾತೆ ಸ್ಟೆಟ್ಮೆಂಟ್ ಪರಿಶೀಲಿಸಿ. ಸಂದೇಹವಿದ್ದರೆ, ನಿಮ್ಮ ಡೆಬಿಟ್/ಕ್ರೆಡಿಟ್ ಕಾರ್ಡ್ನ ಹಿಂಭಾಗದಲ್ಲಿ ಅಥವಾ ನಿಮ್ಮ ಪಾಸ್ಬುಕ್’ನಲ್ಲಿ ಮುದ್ರಿಸಲಾದ ಅಧಿಕೃತ ಗ್ರಾಹಕ ಸೇವಾ ಸಂಖ್ಯೆಯನ್ನ ಮಾತ್ರ ಸಂಪರ್ಕಿಸಿ. ಇಂಟರ್ನೆಟ್’ನಲ್ಲಿ ಕಂಡುಬರುವ ಸಂಖ್ಯೆಗಳನ್ನ ನಂಬಬೇಡಿ ಎಂದು ಪೊಲೀಸರು ಹೇಳಿದ್ದಾರೆ.
ಆನ್ಲೈನ್ ವಂಚನೆಗಳಿಂದ ಪಾರಾಗಲು ಸುರಕ್ಷತಾ ಕ್ರಮಗಳು!
ಅಪರಿಚಿತ ಸಂಖ್ಯೆಗಳಿಂದ ಬರುವ ಯಾವುದೇ ಅನುಮಾನಾಸ್ಪದ ಲಿಂಕ್ಗಳನ್ನು ಕ್ಲಿಕ್ ಮಾಡಬೇಡಿ ಮತ್ತು ನಿಮ್ಮ ಬ್ಯಾಂಕ್ ಒಟಿಪಿ (OTP) ಅಥವಾ ಪಿನ್ ಸಂಖ್ಯೆಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ವಾಟ್ಸಾಪ್ ಸೆಟ್ಟಿಂಗ್ಸ್’ನಲ್ಲಿ ‘Two-Step Verification’ ಆನ್ ಮಾಡಿಕೊಳ್ಳುವುದರಿಂದ ನಿಮ್ಮ ಖಾತೆಯನ್ನು ಹ್ಯಾಕರ್ಗಳಿಂದ ಸುರಕ್ಷಿತವಾಗಿ ರಕ್ಷಿಸಿಕೊಳ್ಳಬಹುದು.
