ಕಟ್ಟಾ ಬ್ರಹ್ಮಚಾರಿ ಆಂಜನೇಯನ ಮಗ ಯಾರು ಗೊತ್ತಾ.?
ಕ್ರಿಯೇಟರ್ ಕನ್ನಡ ಡಿಜಿಟಲ್ ಡೆಸ್ಕ್ : ಅಂಜನೇಯ ಸ್ವಾಮಿ ಸಾಮಾನ್ಯವಾಗಿ ಬ್ರಹ್ಮಚಾರಿ. ಅದ್ರೆ ಕೆಲ ಪುರಾಣಗಳ ಪ್ರಕಾರ, ಹನುಮಂತನಿಗೆ ಒಬ್ಬ ಮಗನಿದ್ದಾನೆ. ಹಾಗಿದ್ರೆ, ಅದೇನು ಕಥೆ ತಿಳಿಯೋಣ ಬನ್ನಿ.
ಹನುಮಂತ ಲಂಕೆಗೆ ತೆರಳಿ ಸೀತಾ ಮಾತೆಯ ಜಾಡು ಹಿಡಿದು ವಾಪಸ್ ಬರುವಾಗ ಆತನ ಮಯ್ಯಿಂದ ಬೆವರಿನ ಹನಿಯೊಂದು ಜಾರಿ ಸಮುದ್ರಕ್ಕೆ ಬೀಳುತ್ತೆ. ಆಗ ಆ ಬೆವರಿನ ಹನಿಯನ್ನ ಮೀನೊಂದು ನುಂಗಿ ಗರ್ಭಿಣಿಯಾಗಿ ಮಕರದ್ವಜ ಅನ್ನೋ ಬಲಶಾಲಿಗೆ ಜನ್ಮ ನೀಡುತ್ತದೆ.
ಈ ಮಕರದ್ವಜ ಕೂಡ ಹನುಮಂತನಂತೆ ಧೈರ್ಯವಂತ. ಪಾತಾಳ ಲೋಕದ ರಾಜ ಮತ್ತು ರಾವಣನ ಸಹೋದರ ಅಹಿರಾವಣನಿಗೆ ನಿಷ್ಠಾವಂತನಾಗಿದ್ದ. ಒಮ್ಮೆ ಅಹಿರಾವಣನು ರಾಮ ಮತ್ತು ಲಕ್ಷ್ಮಣರನ್ನ ಪಾತಾಳಕ್ಕೆ ಕರೆದೊಯ್ದಾಗ, ಹನುಮಂತನು ಅವರನ್ನ ರಕ್ಷಿಸಲು ಹಿಂಬಾಲಿಸಿದ. ಆದ್ರೆ, ಪಾತಾಳ ದ್ವಾರದಲ್ಲಿ ಮಕರಧ್ವಜ ಹನುಮಂತನಿಗೆ ಅಡ್ಡಿಯಾಗಿ ಸವಾಲು ಹಾಕಿದ ಮತ್ತು ತನ್ನನ್ನು ತಾನು ಮಕರಧ್ವಜ, ಬಲಿಷ್ಠ ಯೋಧ ಹನುಮನ ಮಗ ಎಂದು ಪರಿಚಯಿಸಿಕೊಂಡ.
ಆಗ ಅಚ್ಚರಿಗೊಂಡ ಹನುಮಂತ, “ನಾನೇ ಹನುಮ, ಆದರೆ ನಾನು ಹುಟ್ಟಿನಿಂದಲೇ ಬ್ರಹ್ಮಚಾರಿ. ಹಾಗಾಗಿ ನನಗೆ ಮಗನಿರಲು ಸಾಧ್ಯವೇ ಇಲ್ಲ” ಎಂದು ಹೇಳಿದ. ಬಳಿಕ ಹನುಮಂತನು ಧ್ಯಾನದಲ್ಲಿ ಕಣ್ಣು ಮುಚ್ಚಿ ಮಕರಧ್ವಜನ ಜನನಕ್ಕೆ ತನ್ನ ಬೆವರಿನ ಹನಿಯೇ ಕಾರಣ ಅನ್ನೋ ಅಂಶವನ್ನ ತಿಳಿದುಕೊಂಡ.
ಆದಾಗ್ಯೂ ಮಕರಧ್ವಜ ಅಪಾರ ನಿಷ್ಠಾವಂತನಾಗಿದ್ದು, ತನ್ನ ತಂದೆ ಹನುಮನಿಗೆ, “ತನ್ನ ಗುರು ಅಹಿರಾವಣನಿಗೆ ದ್ರೋಹ ಮಾಡಲು ಸಾಧ್ಯವಿಲ್ಲ. ಪಾತಾಳವನ್ನು ಪ್ರವೇಶಿಸಬೇಕಾದ್ರೆ, ತನ್ನೊಂದಿಗೆ ಹೋರಾಡಬೇಕಾಗುತ್ತೆ ಎಂದು ಹೇಳ್ತಾನೆ. ಆಗ ಹನುಮಂತನು ಮಕರಧ್ವಜನನ್ನ ದ್ವಂದ್ವಯುದ್ಧದಲ್ಲಿ ಸೋಲಿಸಿ, ನಂತ್ರ ಅಹಿರಾವಣನನ್ನು ಕೊಂದು ರಾಮ- ಲಕ್ಷ್ಮಣರನ್ನ ರಕ್ಷಿಸುತ್ತಾನೆ. ಹಿಂದಿರುಗುವಾಗ ಮಕರಧ್ವಜನನ್ನ ಆಶೀರ್ವದಿಸಿ, ಸದಾ ಪಾತಳಲೋಕವನ್ನ ರಕ್ಷಿಸುವಂತೆ ಹೇಳಿ ಬರುತ್ತಾನೆ.
ಹನುಮಂತನ ಜೀವನದಲ್ಲಿ ಅಸಾಧಾರಣ ಘಟ್ಟವಾಗಿದ್ದು, ರಾಮನಿಗೆ ಹನುಮ ಹೇಗೋ ಅಹಿರಾವಣನಿಗೆ ಮಕರಧ್ವಜನೂ ನಿಷ್ಠಾವಂತನಾಗಿದ್ದ ಅನ್ನೋದು ವಿಶೇಷ.