National

ಜನ ಸಾಮಾನ್ಯರಿಗೆ ಬಿಗ್ ಶಾಕ್ : ಸ್ಮಾರ್ಟ್‌ಫೋನ್, ಟಿವಿ, ಎಸಿ ಸೇರಿ ಗೃಹೋಪಯೋಗಿ ವಸ್ತುಗಳ ಬೆಲೆ ಏರಿಕೆ! ಯಾವ ಬ್ರ್ಯಾಂಡ್‌ ದರ ಎಷ್ಟು ಹೆಚ್ಚಳ? ವಿವರ ಇಲ್ಲಿದೆ

Spread the love

ಬೆಂಗಳೂರು: ಹಬ್ಬದ ಸೀಸನ್ ಮುಗಿದ ಬೆನ್ನಲ್ಲೇ ಜನ ಸಾಮಾನ್ಯರಿಗೆ ಶಾಕಿಂಗ್ ನ್ಯೂಸ್ ಸಿಕ್ಕಿದ್ದು, ಹೊಸ ಮೊಬೈಲ್ ಫೋನ್, ಸ್ಮಾರ್ಟ್ ಟಿವಿ ಅಥವಾ ಗೃಹೋಪಯೋಗಿ ಎಲೆಕ್ಟ್ರಾನಿಕ್ಸ್ ವಸ್ತುಗಳ ಬೆಲೆ ಹೆಚ್ಚಾಗಿದೆ. ಈ ಮೂಲಕ ಗ್ರಾಹಕರಿಗೆ ಕಂಪನಿಗಳು ಭಾರಿ ಶಾಕ್ ನೀಡಿವೆ. ದೀಪಾವಳಿ ಹಬ್ಬ ಮುಗಿದ ಕೇವಲ ಎರಡು ವಾರಗಳಲ್ಲೇ ದೇಶದ ಪ್ರಮುಖ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್‌’ಗಳು ತಮ್ಮ ಉತ್ಪನ್ನಗಳ ಬೆಲೆಯನ್ನು ಒಮ್ಮೆಲೆ ಗಣನೀಯವಾಗಿ ಹೆಚ್ಚಿಸಿವೆ.

ಸ್ಮಾರ್ಟ್‌ಫೋನ್‌ಗಳು, ಸ್ಮಾರ್ಟ್ ಟಿವಿಗಳು, ವಾಷಿಂಗ್ ಮಷಿನ್‌ಗಳು ಮತ್ತು ಏರ್ ಕಂಡೀಷನರ್‌ಗಳ (AC) ಬೆಲೆಗಳು ಗಗನಕ್ಕೇರಿದ್ದು, 2026ರ ಈ ವರ್ಷದಲ್ಲಿ ಕಂಪನಿಗಳು ಈಗಾಗಲೇ ಹಲವು ಬಾರಿ ದರ ಪರಿಷ್ಕರಣೆ ಮಾಡಿ ಗ್ರಾಹಕರ ಜೇಬಿಗೆ ಕತ್ತರಿ ಹಾಕಿವೆ.

ಸ್ಮಾರ್ಟ್‌ಫೋನ್ ಬೆಲೆಯಲ್ಲಿ ₹2,000 ದಿಂದ ₹4,000 ವರೆಗೆ ಭಾರಿ ಏರಿಕೆ.!
ಪ್ರಮುಖ ಮೊಬೈಲ್ ಕಂಪನಿಗಳಾದ ಸ್ಯಾಮ್‌ಸಂಗ್ (Samsung) ಮತ್ತು ಶಿಯೋಮಿ (Xiaomi) ತಮ್ಮ ಜನಪ್ರಿಯ 5G ಸ್ಮಾರ್ಟ್‌ಫೋನ್ ಮಾದರಿಗಳ ಬೆಲೆಯನ್ನು ಶೇಕಡಾ 18.75 ರವರೆಗೆ ಹೆಚ್ಚಿಸಿದ್ದು, ನವೆಂಬರ್ 15-16 ರಿಂದಲೇ ಈ ಹೊಸ ದರಗಳು ಜಾರಿಗೆ ಬಂದಿವೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ A07 5G (4GB+128GB): ಈ ಹಿಂದೆ ₹20,999 ಕ್ಕೆ ಲಭ್ಯವಿದ್ದ ಈ ಫೋನ್ ಬೆಲೆ ಈಗ ₹22,999 ಕ್ಕೆ ಏರಿಕೆಯಾಗಿದೆ (ಒಮ್ಮೆಲೆ ₹2,000 ಹೆಚ್ಚಳ).

ಶಿಯೋಮಿ ರೆಡ್ಮಿ A7 ಪ್ರೊ 5G (4GB+128GB): ₹15,999 ಇದ್ದ ಈ ಮಾದರಿಯ ದರ ಬರೋಬ್ಬರಿ ₹3,000 ಹೆಚ್ಚಾಗಿ ಈಗ ₹18,999 ತಲುಪಿದೆ.

ಪ್ರೀಮಿಯಂ ಮಾದರಿಗಳು: ಸ್ಯಾಮ್‌ಸಂಗ್ ಗ್ಯಾಲಕ್ಸಿ A57 ಮತ್ತು ರೆಡ್ಮಿ ನೋಟ್ 17 ಪ್ರೊ 5G ಫೋನ್‌ಗಳ ಬೆಲೆಯೂ ₹4,000 ವರೆಗೆ ದುಬಾರಿಯಾಗಿದೆ.

ಟಿವಿ, ಎಸಿ, ಫ್ರಿಡ್ಜ್ ಮತ್ತು ಕಾರುಗಳ ಬೆಲೆಯೂ ದುಬಾರಿ.!

ಕೇವಲ ಮೊಬೈಲ್ ಮಾತ್ರವಲ್ಲದೆ, ಶಿಯೋಮಿ ಸ್ಮಾರ್ಟ್ ಟಿವಿಗಳ ಬೆಲೆ ಶೇಕಡಾ 7 ರಷ್ಟು ಹೆಚ್ಚಾಗಿದೆ. ಅದೇ ರೀತಿ ಹೈಯರ್ (Haier) ಮತ್ತು ಗೋದ್ರೇಜ್ (Godrej) ಕಂಪನಿಗಳು ತಮ್ಮ ಎಲ್ಲಾ ಗೃಹೋಪಯೋಗಿ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಬೆಲೆಯನ್ನು ಶೇಕಡಾ 7 ರವರೆಗೆ ಹೆಚ್ಚಿಸಿವೆ. ಇದರೊಂದಿಗೆ ಮಾರುತಿ ಸುಜುಕಿ, ಟಾಟಾ ಮೋಟಾರ್ಸ್, ಹ್ಯುಂಡೈ ಮತ್ತು ಆಡಿ ಕಂಪನಿಗಳು ಸಹ ತಮ್ಮ ಕಾರುಗಳ ಬೆಲೆಯನ್ನು ಹೆಚ್ಚಿಸಿದ್ದು, ಟಾಟಾ ಮತ್ತು ಹ್ಯುಂಡೈ ಕಂಪನಿಗಳ ನೂತನ ದರಗಳು ಡಿಸೆಂಬರ್ 1ರಿಂದ ಜಾರಿಗೆ ಬರಲಿವೆ.

ಬೆಲೆ ದಿಢೀರ್ ಏರಿಕೆಗೆ ಮುಖ್ಯ ಕಾರಣಗಳೇನು?

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತಾಮ್ರ, ಅಲ್ಯೂಮಿನಿಯಂ, ಉಕ್ಕು ಮತ್ತು ಪ್ಲಾಸ್ಟಿಕ್‌’ನಂತಹ ಕೈಗಾರಿಕಾ ಕಚ್ಚಾ ವಸ್ತುಗಳ ಬೆಲೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಇದರೊಂದಿಗೆ ಸರಕು ಸಾಗಣೆ ವೆಚ್ಚ ಹೆಚ್ಚಳ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುತ್ತಿರುವುದರಿಂದ ವಿದೇಶದಿಂದ ಆಮದು ಮಾಡಿಕೊಳ್ಳುವ ಬಿಡಿಭಾಗಗಳು ದುಬಾರಿಯಾಗಿ ಕಂಪನಿಗಳ ಮೇಲೆ ಆರ್ಥಿಕ ಒತ್ತಡ ಹೆಚ್ಚಾಗಿದೆ. ಈ ಎಲ್ಲಾ ಕಾರಣಗಳಿಂದಾಗಿ ಕಂಪನಿಗಳು ತಮ್ಮ ಉತ್ಪನ್ನಗಳ ಬೆಲೆಯನ್ನ ಗಣನೀಯವಾಗಿ ಹೆಚ್ಚಿಸಲಿವೆ ಎಂದು ವರದಿಯಾಗಿದೆ.

ಖರೀದಿಸುವ ಗ್ರಾಹಕರಿಗೆ ಸಲಹೆ.! ಹೊಸ ಸ್ಮಾರ್ಟ್‌ಫೋನ್ ಅಥವಾ ಗೃಹೋಪಯೋಗಿ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಖರೀದಿಸಲು ಯೋಜಿಸುತ್ತಿರುವ ಗ್ರಾಹಕರು, ಈಗಲೂ ಹಳೆಯ ದರದಲ್ಲಿ (Old Stock) ಲಭ್ಯವಿರುವ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳು ಅಥವಾ ಸ್ಥಳೀಯ ಮಳಿಗೆಗಳಲ್ಲಿ ವಿಚಾರಿಸಿ ತಕ್ಷಣ ಖರೀದಿಸುವುದು ಉತ್ತಮ. ಏಕೆಂದರೆ ಡಿಸೆಂಬರ್ ಮೊದಲ ವಾರದಿಂದ ಎಲ್ಲಾ ಹೊಸ ಸ್ಟಾಕ್‌ಗಳಿಗೆ ಪರಿಷ್ಕೃತ ದುಬಾರಿ ದರಗಳು ಸಂಪೂರ್ಣವಾಗಿ ಅನ್ವಯವಾಗಲಿವೆ.

Leave a Reply

Your email address will not be published. Required fields are marked *