ಬ್ಯಾಂಕ್ ಖಾತೆಯೇ ಇಲ್ವಾ? ಚಿಂತೆ ಬೇಡ! ಇನ್ಮುಂದೆ ಬ್ಯಾಂಕ್ ಖಾತೆ ಇಲ್ಲದಿದ್ರು ಹಣ ಕಳುಹಿಸ್ಬೋದು, ಪಡೆಯ್ಬೋದು ; ‘RBI’ ಹೊಸ ಗೈಡ್ಲೈನ್ಸ್
ನವದೆಹಲಿ : ದೇಶದ ಜನಸಾಮಾನ್ಯರಿಗೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಗುಡ್ ನ್ಯೂಸ್ ನೀಡಿದೆ. ಇನ್ಮುಂದೆ ಬ್ಯಾಂಕ್ ಖಾತೆ ಇಲ್ಲದವ್ರು ಕೂಡ ಹಣ ಕಳಿಸಲು ಮತ್ತು ಪಡೆಯಲು ಸಾಧ್ಯವಾಗುತ್ತೆ.
ಹೌದು, ತುರ್ತು ಸಂದರ್ಭಗಳಲ್ಲಿ ಹಣ ವರ್ಗಾವಣೆ ಮಾಡಲು ಇನ್ಮುಂದೆ ಬ್ಯಾಂಕ್ ಖಾತೆ ಹೊಂದುವುದು ಕಡ್ಡಾಯವಲ್ಲ. ಬ್ಯಾಂಕ್ ಖಾತೆ ಇಲ್ಲದವರೂ ಸಹ ಸುಲಭವಾಗಿ ನಗದು ನೀಡಿ ಇತರರ ಖಾತೆಗೆ ಹಣ ತಲುಪಿಸಲು ಮತ್ತು ನಗದು ರೂಪದಲ್ಲೇ ಹಣವನ್ನು ಸ್ವೀಕರಿಸಲು ಆರ್ಬಿಐ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಈ ನೂತನ ‘ದೇಶೀಯ ಹಣ ವರ್ಗಾವಣೆ ನಿಯಮಾವಳಿಗಳು 2026’ ಇತ್ತೀಚೆಗಷ್ಟೇ ಅಂದರೆ ನವೆಂಬರ್ 11ರಿಂದ ಅಧಿಕೃತವಾಗಿ ಜಾರಿಗೆ ಬಂದಿವೆ.
ATM ಮತ್ತು ಬ್ಯಾಂಕಿಂಗ್ ಪ್ರತಿನಿಧಿ ಮೂಲಕ ಹಣ ಕಳುಹಿಸುವ ಮಿತಿ!
ನಿಮ್ಮ ಬಳಿ ಯಾವುದೇ ಬ್ಯಾಂಕಿನ ಖಾತೆ ಇಲ್ಲದಿದ್ದರೂ, ನೀವು ನೇರವಾಗಿ ಬ್ಯಾಂಕಿಂಗ್ ಪ್ರತಿನಿಧಿ (Business Correspondent) ಅಥವಾ ನಿರ್ದಿಷ್ಟ ಎಟಿಎಂ (ATM) ಕೇಂದ್ರಗಳಿಗೆ ಭೇಟಿ ನೀಡಿ ನಗದು ನೀಡಿ ಬೇರೆಯವರ ಖಾತೆಗೆ ಹಣ ವರ್ಗಾಯಿಸಬಹುದು. ಅಷ್ಟೇ ಅಲ್ಲ, ಬ್ಯಾಂಕ್ ಖಾತೆ ಇಲ್ಲದವರು ನಿಗದಿತ ಮಿತಿಯೊಳಗೆ ನಗದು ರೂಪದಲ್ಲಿ ಹಣವನ್ನೂ ಪಡೆಯಬಹುದು. ಇದಕ್ಕೆ ಆರ್ಬಿಐ ವಿಧಿಸಿರುವ ಮಿತಿಗಳು ಹೀಗಿವೆ.
ಪ್ರತಿ ವಹಿವಾಟಿನ ಮಿತಿ : ಒಂದು ಬಾರಿಗೆ ಗರಿಷ್ಠ ₹5,000 ವರೆಗೆ ಮಾತ್ರ ನಗದು ವರ್ಗಾವಣೆ ಮಾಡಲು ಅವಕಾಶವಿರುತ್ತದೆ.ಮಾಸಿಕ ಗರಿಷ್ಠ ಮಿತಿ : ಒಬ್ಬ ವ್ಯಕ್ತಿಯು ಒಂದು ತಿಂಗಳ ಅವಧಿಯಲ್ಲಿ ಒಟ್ಟು ₹25,000 ವರೆಗೆ ಮಾತ್ರ ಈ ವ್ಯವಸ್ಥೆಯಡಿ ಹಣ ಕಳುಹಿಸಬಹುದು.
ಬ್ಯಾಂಕ್ ಖಾತೆ ಇಲ್ಲದವರು ನಗದು ಪಡೆಯುವುದು ಹೇಗೆ?
ನಿಮ್ಮ ಸ್ನೇಹಿತರು ಅಥವಾ ಕುಟುಂಬದವರು ತಮ್ಮ ಬ್ಯಾಂಕ್ ಖಾತೆಯಿಂದ ನಿಮಗೆ ಹಣ ಕಳುಹಿಸಿದರೆ, ನಿಮ್ಮ ಬಳಿ ಖಾತೆ ಇಲ್ಲದಿದ್ದರೂ ಸಹ ನೀವು ನಗದನ್ನು ಪಡೆದುಕೊಳ್ಳಬಹುದು. ಇದಕ್ಕಾಗಿ ಆರ್ಬಿಐ ಈ ಕೆಳಗಿನ ನಿಯಮಗಳನ್ನು ನಿಗದಿಪಡಿಸಿದೆ.
ಪ್ರತಿ ವಹಿವಾಟಿಗೆ: ಒಂದು ಬಾರಿಗೆ ಗರಿಷ್ಠ ₹10,000 ರೂಪಾಯಿಗಳನ್ನು ನಗದು ರೂಪದಲ್ಲಿ ಪಡೆಯಬಹುದು.
ತಿಂಗಳ ಒಟ್ಟು ಮಿತಿ: ಒಬ್ಬ ಫಲಾನುಭವಿಯು ತಿಂಗಳಿಗೆ ಗರಿಷ್ಠ ₹25,000 ವರೆಗೆ ಮಾತ್ರ ನಗದು ಸ್ವೀಕರಿಸಲು ಅರ್ಹರಾಗಿರುತ್ತಾರೆ.
ಬ್ಯಾಂಕ್ ಶಾಖೆಗಳ ಮೂಲಕ NEFT ವಹಿವಾಟಿಗೆ ₹50,000 ಮಿತಿ!ಎಟಿಎಂ ಮತ್ತು ಬ್ಯಾಂಕಿಂಗ್ ಪ್ರತಿನಿಧಿಗಳಷ್ಟೇ ಅಲ್ಲದೆ, ನೇರವಾಗಿ ಯಾವುದೇ ಬ್ಯಾಂಕ್ ಶಾಖೆಗೆ ಭೇಟಿ ನೀಡುವ ‘ವಾಕ್-ಇನ್’ (Walk-in) ಗ್ರಾಹಕರಿಗೂ ವಿಶೇಷ ಅವಕಾಶ ಕಲ್ಪಿಸಲಾಗಿದೆ. ಬ್ಯಾಂಕ್ ಖಾತೆ ಇಲ್ಲದ ಗ್ರಾಹಕರು ನೇರವಾಗಿ ನಗದು ಪಾವತಿಸಿ NEFT ಮೂಲಕ ಪ್ರತಿ ವಹಿವಾಟಿಗೆ ಗರಿಷ್ಠ ₹50,000 ವರೆಗೆ ಹಣವನ್ನು ಇತರರ ಖಾತೆಗೆ ರವಾನಿಸಬಹುದು.
ಸುರಕ್ಷತೆಗಾಗಿ ಕಡ್ಡಾಯ KYC ನಿಯಮಗಳು!
ನಗದು ವಹಿವಾಟುಗಳ ದುರುಪಯೋಗವನ್ನು ತಡೆಯಲು ಆರ್ಬಿಐ ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ತಂದಿದೆ. ಹಣ ಕಳುಹಿಸುವವರು ತಮ್ಮ ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆಯನ್ನು ಒಟಿಪಿ (OTP) ಮೂಲಕ ನೋಂದಾಯಿಸಬೇಕು. ಜೊತೆಗೆ, ಆಧಾರ್ ಅಥವಾ ವೋಟರ್ ಐಡಿಯಂತಹ ಅಧಿಕೃತ ಮಾನ್ಯ ಗುರುತಿನ ದಾಖಲೆಯನ್ನು (OVD) ಸ್ವಯಂ ದೃಢೀಕರಿಸಿ ಸಲ್ಲಿಸುವುದು ಕಡ್ಡಾಯವಾಗಿದೆ. ಪ್ರತಿ ವಹಿವಾಟಿಗೂ ಹೆಚ್ಚುವರಿ ದೃಢೀಕರಣ (AFA) ಪ್ರಕ್ರಿಯೆ ಇರಲಿದ್ದು, ವಹಿವಾಟು ಸಂಪೂರ್ಣ ನಗದು ಆಧಾರಿತ ಎಂಬುದನ್ನು ಬ್ಯಾಂಕಿಂಗ್ ಸಂದೇಶದಲ್ಲಿ ಸ್ಪಷ್ಟಪಡಿಸಲಾಗುತ್ತದೆ.
ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಈ ಆಫ್ಲೈನ್ ನಗದು ವರ್ಗಾವಣೆ ಸೇವೆಗಳಿಗೆ ಒಂದು ನಿಗದಿತ ಸಮಂಜಸವಾದ ಸೇವಾ ಶುಲ್ಕವನ್ನು ವಿಧಿಸಬಹುದು. ಹಣಕಾಸು ವರ್ಗಾವಣೆಯಲ್ಲಿ ಯಾವುದೇ ತೊಂದರೆ ಅಥವಾ ವಂಚನೆ ಎದುರಾದರೆ ಆರ್ಬಿಐನ ಏಕೀಕೃತ ಒಂಬುಡ್ಸ್ಮನ್ ಯೋಜನೆ (Integrated Ombudsman Scheme) ಅಡಿಯಲ್ಲಿ ದೂರು ದಾಖಲಿಸಲು ಗ್ರಾಹಕರಿಗೆ ಮುಕ್ತ ಅವಕಾಶವಿದೆ.
